   ಮೂಲದೊಡನೆ ಹೋಲಿಸಿ 

ಏಕಸ್ವಾಮ್ಯ: ಗೊತ್ತಾದ ಮಾರುಕಟ್ಟೆಯಲ್ಲಿ ಒಂದು ಸರಕು ಅಥವಾ ಸೇವೆಯ ಸರಬರಾಯಿಯ ವಿಶಿಷ್ಟ ಹತೋಟಿ ಅಥವಾ ಒಂದು ಮಾರುಕಟ್ಟೆಯಲ್ಲಿ ಅದನ್ನು ಮಾರುವ ಅಥವಾ ಕೊಳ್ಳುವ ಬಗ್ಗೆ ಪಡೆದಿರುವ ವಿಶಿಷ್ಟ ಹಕ್ಕು (ಮೊನಾಪೊಲಿ). ವ್ಯಾಪಾರದಲ್ಲಿ ಸಹಜವಾಗಿ 

ಕಂಡುಬರುವ ಸ್ಪರ್ಧೆಯ ಪರಿಣಾಮವಾಗಿ ಏಕಸ್ವಾಮ್ಯ ಪರಿಸ್ಥಿತಿ ಉದ್ಭವಿಸಬಹುದು ಅಥವಾ ಸರ್ಕಾರವೇ ಕೆಲವು ಉದ್ದೇಶಗಳಿಗಾಗಿ ಈ ವಿಶಿಷ್ಟ ಹಕ್ಕು ನೀಡಬಹುದು. ಮೊನಾಪೊಲಿ ಎಂಬ ಶಬ್ದದವ್ಯುತ್ಪತ್ತಿಯ ದೃಷ್ಟಿಯಿಂದ ವಿಚಾರ ಮಾಡಿದ್ದಾದರೆ, ಒಬ್ಬ ಮಾರಾಟಗಾರನೇ 

ಒಂದು ಸರಕಿನ ಸರಬರಾಜುದಾರನಾಗಿದ್ದು, ಈ ಸರಕಿಗೆ ಪ್ರತಿಯಾಗಿ ಬೇರಾವ ಸರಕನ್ನೂ ಸಾಮಾನ್ಯವಾಗಿ ಬಳಸುವುದು ಸಾಧ್ಯವಿಲ್ಲದಂಥ ಸ್ಥಿತಿಯೇ ಏಕಸ್ವಾಮ್ಯ ಆದರೆ ವಿಕ್ರಯದಾರರ ನಡುವೆ ಪರಿಪುರ್ಣ ಸ್ಪರ್ಧೆಯಿಲ್ಲದಂಥ ಪೇಟೆಯ ಪರಿಸ್ಥಿತಿಯನ್ನೂ ಏಕಸ್ವಾಮ್ಯವೆಂದೇ 

ಪರಿಗಣಿಸುವುದು ರೂಢಿಯಲ್ಲಿ ಬಂದಿದೆ. ಪದಾರ್ಥಗಳ ಉತ್ಪಾದನೆ, ಸರಬರಾಜು ಮತ್ತು ಬೆಲೆಯ ನಿರ್ಣಯ ಒಬ್ಬನ ಅಥವಾ ಕೆಲವು ಉದ್ಯಮಿಗಳ ಇಲ್ಲವೇ ಒಂದು ಅಥವಾ ಕೆಲವು ಉದ್ಯಮ ಸಂಸ್ಥೆಗಳ ಹತೋಟಿಯಲ್ಲಿರುವುದೇ ಏಕಸ್ವಾಮ್ಯವೆನ್ನಬಹುದು. ಪರಿಪುರ್ಣ 

ಸ್ಪರ್ಧೆಯ ಪರಿಸ್ಥಿತಿಯಲ್ಲಿ ಬೆಲೆಯ ನಿಷ್ಕರ್ಷೆಯಾಗುವುದು ಇಡೀ ಮಾರುಕಟ್ಟೆಯಲ್ಲಿನ ಪದಾರ್ಥದ ಬೇಡಿಕೆ ಮತ್ತು ಸರಬರಾಜಿನಿಂದ. ಆದರೆ ಏಕಸ್ವಾಮ್ಯದಲ್ಲಿ ಒಟ್ಟು ಸರಬರಾಜನ್ನು ಹೆಚ್ಚು ಕಡಿಮೆ ಮಾಡಿ ಆ ಮೂಲಕ ವಸ್ತುಗಳ ಬೆಲೆಯನ್ನು ಬದಲಾಯಿಸುವುದು ಸಾಧ್ಯ. 

ಏಕಸ್ವಾಮ್ಯ ಹೊಂದಿದವನಿಗೆ ಪ್ರತಿಸ್ಪರ್ಧಿಗಳ ಭಯವಿರುವುದಿಲ್ಲ. ಪುರೈಕೆಯ ಮೇಲೆ ಸಂಪುರ್ಣ ಹತೋಟಿಯಿರುವುದರಿಂದ, ಉತ್ಪಾದನೆಯ ವೆಚ್ಚಕ್ಕಿಂತ ಶಕ್ಯವಿರುವಷ್ಟು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಬಹುದು. ಆದ್ದರಿಂದ, ಬಹು ಸಾಮಾನ್ಯವಾಗಿ, ಏಕಸ್ವಾಮ್ಯದ ಬೆಲೆ 

ಸ್ಪರ್ಧೆಯ ಬೆಲೆಗಿಂತ ಹೆಚ್ಚಾಗಿರುತ್ತದೆ. ಉತ್ಪಾದನೆ ಸರಬರಾಜುಗಳ ಮೇಲೆ ಹತೋಟಿಯಿರುವುದರಿಂದ ವಿಶೇಷ ಲಾಭ ಗಳಿಸಬಹುದು.
ಉದ್ಯಮಿಗಳು ತಮ್ಮ ಪ್ರತಿಸ್ಪರ್ಧಿಗಳನ್ನು ವ್ಯವಹಾರದಿಂದ ಹೊರದೂಡಿ ಏಕಸ್ವಾಮ್ಯ ಹೊಂದಲು ಪ್ರಯತ್ನಿಸುವರು. ಏಕಸ್ವಾಮ್ಯ ಪರಿಸ್ಥಿತಿಯಲ್ಲೂ ಕೆಲವು ಉದ್ಯಮಿಗಳಲ್ಲಿ ಸ್ಪರ್ಧೆ ಇರಬಹುದು. ಅನೇಕ ಬಾರಿ ಅವರು ತಮ್ಮ ತಮ್ಮೊಳಗೆ ಸ್ಪರ್ಧೆ ನಿಲ್ಲಿಸಿ, ಪರಸ್ಪರ ಒಪ್ಪಂದದ 

ಮೇಲೆ ವಿಸ್ತೃತ ಏಕಸ್ವಾಮ್ಯ ನಿರ್ಮಿಸುತ್ತಾರೆ. ವ್ಯಾಪಾರ ಸಂಸ್ಥೆಗಳೂ ಇಂಥ ಕಾರ್ಯ ಕೈಗೊಳ್ಳಬಹುದು.
ಏಕಸ್ವಾಮ್ಯವನ್ನು (1) ಸ್ವಾಭಾವಿಕ, (2) ಸಾಮಾಜಿಕ, (3) ನ್ಯಾಯಬದ್ಧ ಮತ್ತು (4) ಐಚ್ಛಿಕ ಎಂದು ನಾಲ್ಕು ರೀತಿಯಾಗಿ ವಿಂಗಡಿಸಬಹುದು. ಸ್ವಾಭಾವಿಕ ಕಾರಣಗಳ ಫಲವಾಗಿ ಕೆಲವು ಪದಾರ್ಥಗಳನ್ನು ಒಂದು ದೇಶದಲ್ಲಿ ಮಾತ್ರ ಉತ್ಪಾದಿಸುವುದು ಸಾಧ್ಯ. (ಉದಾ: 

ಆಫ್ರಿಕದಲ್ಲಿ ವಜ್ರಗಳ ಉತ್ಪಾದನೆ) ಇಲ್ಲಿ ಸ್ವಾಭಾವಿಕವಾಗಿಯೇ ಏಕಸ್ವಾಮ್ಯಕ್ಕೆ ಆಸ್ಪದವುಂಟು. ಸರ್ವಜನೋಪಯೋಗಿ ಉದ್ಯಮ ಕ್ಷೇತ್ರಗಳಾಗಿ ರೈಲ್ವೆಗಳು. ಪರಮಾಣುಶಕ್ತಿ ಉತ್ಪಾದನೆ ಮುಂತಾದವುಗಳಲ್ಲಿ ಸ್ಪರ್ಧೆ ನಡೆಯುವುದು. ಸಮಾಜ ಹಿತಸಾಧನೆಯ ದೃಷ್ಟಿಯಿಂದ 

ಒಳ್ಳೆಯದಲ್ಲ ಆದ್ದರಿಂದ, ಇಂಥವುಗಳಿಗೆ ನೀಡಿದ ಏಕಸ್ವಾಮ್ಯ ಸಾರ್ವಜನಿಕ ಏಕಸ್ವಾಮ್ಯವೆನಿಸಿಕೊಳ್ಳುತ್ತದೆ. ಒಂದು ಗ್ರಂಥದ ಹಕ್ಕು, ವ್ಯಾಪಾರ ಚಿಹ್ನೆ ಮುಂತಾದವುಗಳ ಬಗ್ಗೆ ಕಾನೂನಿನ ಸಂರಕ್ಷಣೆ ಇರುತ್ತದೆ. ಇದು ನ್ಯಾಯಬದ್ಧ ಏಕಸ್ವಾಮ್ಯ. ಕೆಲವು ಉದ್ಯಮಗಳಲ್ಲಿ 

ಸ್ಪರ್ಧೆಯ ಪರಿಸ್ಥಿತಿಯಿಂದ ಏಕಸ್ವಾಮ್ಯ ಸ್ಥಿತಿಗೆ ಕಾಲಾನುಕ್ರಮದಲ್ಲಿ ಪರಿವರ್ತನೆಯಾಗಬಹುದು. ಪ್ರಾರಂಭದಲ್ಲಿ ಪರಸ್ಪರ ಸ್ಪರ್ಧಿಗಳಾಗಿದ್ದ ಉದ್ಯಮಿಗಳು ಸ್ಪರ್ಧೆಯಿಂದ ಹಾನಿಯಾಗುವುದನ್ನು ಮನಗಂಡು ತಮ್ಮತಮ್ಮಲ್ಲೇ ಒಂದು ರೀತಿಯ ಒಪ್ಪಂದಕ್ಕೆ ಬರಬಹುದು. 

ಶಕ್ತವಾದ ಸಂಸ್ಥೆ ಇತರ ಸಂಸ್ಥೆಗಳನ್ನು ವಿಲೀನಗೊಳಿಸಿಕೊಳ್ಳಬಹುದು. ಎರಡು ಅಥವಾ ಹೆಚ್ಚು ಸಂಸ್ಥೆಗಳು ಸಂಯೋಗ ಹೊಂದಬಹುದು. ಹೀಗೆ ಸಂಭವಿಸಿದ್ದೇ ಐಚ್ಛಿಕ ಏಕಸ್ವಾಮ್ಯ.
ಏಕಸ್ವಾಮ್ಯದಲ್ಲಿ ಬೆಲೆಯ ನಿರ್ಣಯ: ಜನಹಿತ ದೃಷ್ಟಿಯಿಂದ ಸ್ಥಾಪಿತವಾದ ಏಕಸ್ವಾಮ್ಯಗಳಲ್ಲಿ ಲಾಭಕ್ಕಿಂತ ಸೇವೆಯೇ ಮುಖ್ಯೋದ್ದೇಶ. ಇತರ ಏಕಸ್ವಾಮ್ಯಗಳಲ್ಲಿ ಪರಿಸ್ಥಿತಿಯ ಉಪಯೋಗ ಪಡೆದು ಪರಮಾವಧಿ ಲಾಭ ಗಳಿಸಬೇಕೆಂಬುದೇ ಉದ್ಯಮಿಗಳ 

ಉದ್ದೇಶವಾಗಿರುತ್ತದೆ. ಇಂಥ ಪರಿಸ್ಥಿತಿಯಲ್ಲೂ ಏಕಸ್ವಾಮ್ಯ ಸಂಸ್ಥೆ ಅಥವಾ ವ್ಯಕ್ತಿಗೆ ಸಂಪುರ್ಣ ಅಧಿಕಾರ ಯಾವಾಗಲೂ ಇರುವುದಿಲ್ಲ. ಇಷ್ಟಾದರೂ ಸ್ಪರ್ಧೆ ಇದ್ದಿರಬಹುದು. ಸ್ಪರ್ಧೆ ಇರಲಿ ಇಲ್ಲದಿರಲಿ, ಏಕಸ್ವಾಮ್ಯದ ಪದಾರ್ಥಕ್ಕೆ ಪ್ರತಿಯಾಗಿ ಬಳಸಬಹುದಾದ ಸರಕುಗಳು 

ಇರಲಿ, ಇಲ್ಲದಿರಲಿ ಎಲ್ಲ ಏಕಸ್ವಾಮ್ಯಗಳೂ ಸಂಪುರ್ಣ ಸರ್ವಾಧಿಕಾರಿ ಮನೋಭಾವದಿಂದ ವರ್ತಿಸುವುದು ಸರ್ವಥಾ ಸಾಧ್ಯವಿಲ್ಲ. ಸಾರ್ವಜನಿಕ ಅಸಮಾಧಾನ, ಬಹಿಷ್ಕಾರ, ಸರ್ಕಾರದ ನಿಯಂತ್ರಣ-ಮುಂತಾದವು ಏಕಸ್ವಾಮ್ಯದ ಕೈ ತಡೆಯುವ ಕೆಲವು ಅಂಶಗಳು. 

ಆದರೂ ಏಕಸ್ವಾಮಿ ಪರಮಾವಧಿ ಲಾಭದ ಮೇಲೆ ಸಾಮಾನ್ಯವಾಗಿ ಕಣ್ಣಿಟ್ಟೇ ಇರುತ್ತಾನೆ. ಈ ಉದ್ದೇಶಸಾಧನೆಗಾಗಿ ಆತ ತನ್ನಿಚ್ಛೆಯಂತೆ ಪದಾರ್ಥದ ಬೆಲೆ ನಿಷ್ಕರ್ಷೆ ಮಾಡಬಹುದು ಅಥವಾ ತನಗೆ ಸರಿ ತೋರಿದಷ್ಟು ಪರಿಮಾಣದಲ್ಲಿ ಸರಕನ್ನು ಮಾರಾಟಕ್ಕೆ ಬಿಡುಗಡೆ 

ಮಾಡಬಹುದು. ಗರಿಷ್ಠ ಧನಲಾಭದ ಬಿಂದುವಿನವರೆಗೆ ಆತ ಉತ್ಪಾದನೆ ಮಾಡುತ್ತಾನೆ; ಬೆಲೆ ಏರಿಸುತ್ತಾನೆ. ಯಾವ ಮಟ್ಟದಲ್ಲಿ ಆತನ ಲಾಭದ ಮೊತ್ತ ಅತ್ಯಂತ ಹೆಚ್ಚಾಗಿರುತ್ತದೋ ಅದು ಆತನ ಸಮತೋಲ ಸ್ಥಿತಿ ಅಧಿಕಾಧಿಕವಾಗಿ ಉತ್ಪಾದಿಸಿದಷ್ಟೂ, ಆ ಉತ್ಪಾದನೆಯ 

ಒಂದೊಂದು ಅಂಚಿನ ಘಟಕದ ವೆಚ್ಚಕ್ಕಿಂತ ಹುಟ್ಟುವಳಿ ಹೆಚ್ಚಾಗಿರುವವರೆಗೂ, ಆತ ಉತ್ಪಾದನೆ ಹೆಚ್ಚಿಸುತ್ತ ಹೋಗು ತ್ತಾನೆ. ಅಂಚಿನ ವೆಚ್ಚವೂ ಅಂಚಿನ ಹುಟ್ಟುವಳಿಯೂ ಸಮನಾಗಿರುವಲ್ಲೇ ಸಮತೋಲ. ಅಲ್ಲಿಂದಾಚೆಗೆ ಉತ್ಪಾದನೆ ಲಾಭದಾಯಕವಲ್ಲ; ಅಂಚಿನ 

ಉತ್ಪತ್ತಿಯ ಹುಟ್ಟುವಳಿ ಗಿಂತ ಅಂಚಿನ ವೆಚ್ಚವೇ ಹೆಚ್ಚಾಗುವು ದರಿಂದ ಅಲ್ಲಿ ನಿಲ್ಲುವುದು ವಿವೇಕ.
ಏಕಸ್ವಾಮ್ಯ ಸಂಸ್ಥೆಯ ಬೆಲೆ-ವೆಚ್ಚ ಸಮತೋಲವನ್ನು ನಕ್ಷೆ 1ರಲ್ಲಿ ವಿವರಿಸಿದೆ. ಈ ನಕ್ಷೆಯಲ್ಲಿ ಂಖ ಎಂಬುದು ಪದಾರ್ಥದ ಬೇಡಿಕೆ ರೇಖೆ ಅಥವಾ ಸರಾಸರಿ ಹುಟ್ಟುವಳಿ ರೇಖೆ. ಪದಾರ್ಥದ ಬೆಲೆ ಏರಿದಷ್ಟೂ ಅದಕ್ಕೆ ಬೇಡಿಕೆ ಕಡಿಮೆಯಾಗುವುದರಿಂದ ಇದು ಬಲಗಡೆಗೆ 

ಬಾಗಿದೆ; ಪದಾರ್ಥದ ತಯಾರಿಕೆಯ ಸರಾಸರಿ ವೆಚ್ಚ (ಂಅ) ಇಳಿಮೊಗನಾಗಿದೆಯೆಂದು ಇಲ್ಲಿ ಭಾವಿಸಿಕೊಳ್ಳಲಾಗಿದೆ. ಅಂಚಿನ ಹುಟ್ಟುವಳಿ ಅಥವಾ ಅಂಚಿನ ಬೇಡಿಕೆಯೂ (ಒಖ) ಸರಾಸರಿ ಬೇಡಿಕೆ ಅಥವಾ ಸರಾಸರಿ ಹುಟ್ಟುವಳಿಯಂತೆಯೇ ಬಲಕ್ಕೆ ಬಾಗಿದೆ.
ಆದರೆ ಸರಾಸರಿ ಬೇಡಿಕೆ ಅಥವಾ ಸರಾಸರಿ ಹುಟ್ಟುವಳಿ (ಂಖ) ಇದರ (ಒಖ) ಪರಿಣಾಮವಾದ್ದರಿಂದ ಇದು (ಒಖ) ಂಖ ಗಿಂತ ಹೆಚ್ಚು ಕಡಿದು. ಸರಾಸರಿ ವೆಚ್ಚದ ರೇಖೆಯೂ (ಂಅ) ಅಂಚಿನ ವೆಚ್ಚದ ರೇಖೆಯೂ (ಒಅ) ಇಳಿಮುಖ ಪ್ರವೃತ್ತಿ ತೋರಿಸುತ್ತಿವೆ. ಅಂಚಿನ 

ಘಟಕದ ಉತ್ಪಾದನೆಯ ವೆಚ್ಚವೂ (ಒಅ) ಅಂಚಿನ ಘಟಕದ ಮಾರಾಟದಿಂದ ಲಭಿಸುವ ಹಣದ ಹುಟ್ಟುವಳಿಯೂ (ಒಖ) ಎಲ್ಲಿ ಸಮನಾಗಿರುತ್ತವೋ (ಸಂಧಿಸುತ್ತವೋ) ಅಲ್ಲಿ ಏಕಸ್ವಾಮ್ಯ ಸಂಸ್ಥೆ ಉತ್ಪಾದನೆಯನ್ನು ನಿಲ್ಲಿಸಬೇಕು. ಈ ಘಟ್ಟದಲ್ಲಿ ಅದರ ಉತ್ಪತ್ತಿ ಔಒ; ಬೆಲೆ ಔP. 

ಸರಾಸರಿ ವೆಚ್ಚ ಔW; ಏಕಸ್ವಾಮ್ಯದ ಲಾಭ PಖಐW. ಇದು ಆ ಸಂಸ್ಥೆಯ ಸಮತೋಲ ಸ್ಥಿತಿ. ಏಕಸ್ವಾಮ್ಯ ಉತ್ಪಾದಕನ ಸಮತೋಲ ಸ್ಥಿತಿಯಲ್ಲಿ ಆತನ ಪದಾರ್ಥದ ಬೇಡಿಕೆಯ ಪುಟಿತ ಒಂದಕ್ಕಿಂತ ಹೆಚ್ಚಾಗಿಯೇ ಇರುತ್ತದೆಯೆಂಬುದನ್ನು ಗಮನಿಸಬೇಕು. ಅದು 

ಒಂದಕ್ಕಿಂತ ಕಡಿಮೆಯಾಗಿದ್ದಾಗ ಉತ್ಪಾದನೆಯನ್ನು ಹೆಚ್ಚು ಉತ್ಪಾದಿಸಿದಷ್ಟೂ ಒಟ್ಟು ಹುಟ್ಟುವಳಿ ಇಳಿಯುತ್ತದೆ; ಉತ್ಪಾದನೆಯಲ್ಲಿ ಕಡಿತ ಮಾಡಿದಷ್ಟೂ ಒಟ್ಟು ಹುಟ್ಟುವಳಿ ಹೆಚ್ಚುತ್ತದೆ. ಎಂದರೆ ಬೇಡಿಕೆಯ ಪುಟಿತ ಒಂದಕ್ಕಿಂತ ಕಡಿಮೆಯಿದ್ದಾಗ ಅಂಚಿನ ಹುಟ್ಟುವಳಿ 

ಋಣಾತ್ಮಕವಾಗಿರುತ್ತದೆ (ನೆಗೆಟಿವ್). ಆದ್ದರಿಂದ ಇಂಥ ಪರಿಸ್ಥಿತಿಯಲ್ಲಿ ಏಕಸ್ವಾಮ್ಯದ ಸಮತೋಲ ಸಾಧ್ಯವಿರುವುದಿಲ್ಲ. ಅಂಚಿನ ವೆಚ್ಚ ಇಳಿಮುಖವಾಗಿರುವುದೆಂದು ಊಹಿಸಿ ಕೊಂಡು ನಕ್ಷೆ 1ರಲ್ಲಿ ಏಕಸ್ವಾಮಿಯ ಸಮತೋಲ ಸ್ಥಿತಿಯನ್ನು ನಿಷ್ಕರ್ಷಿಸಿದ್ದಾಯಿತು. ಅಂಚಿನ ವೆಚ್ಚ 

ಏರುಮುಖವಾಗಿದ್ದಾಗಲೂ ಅದು ಒಂದೇ ಸಮನಾಗಿರುವಾಗಲೂ ಆತನ ಉತ್ಪಾದನೆ ಮತ್ತು ಬೆಲೆಗಳ ಸಮತೋಲವನ್ನು ಕ್ರಮವಾಗಿ ನಕ್ಷೆ 2 ಮತ್ತು 3ರಲ್ಲಿ ತೋರಿಸಿದೆ. 
ಅಂಚಿನ ವೆಚ್ಚ (ಒಅ) ಇಳಿಮುಖವಾಗಿರುವಾಗ (ನಕ್ಷೆ 1) ಒಅ ರೇಖೆ ಸರಾಸರಿ ವೆಚ್ಚರೇಖೆಯ (ಂಅ) ಕೆಳಗಡೆಯಿರುತ್ತದೆಂಬುದನ್ನೂ ಅಂಚಿನ ವೆಚ್ಚ ಏರುಮುಖವಾಗಿರುವಾಗ ಅದು ಂಅ ರೇಖೆಯ ಮೇಲುಗಡೆಯಿರುತ್ತದೆಂಬುದನ್ನೂ ಅಂಚಿನ ವೆಚ್ಚ ಒಂದೇ ಸಮನಾಗಿರುವಾಗ 

ಂಅ, ಒಅಗಳೆರಡೂ ಒಂದೇ ಆಗಿರುವುದೆಂಬುದನ್ನೂ ಗಮನಿಸಬೇಕು. ಈ ಪರಿಸ್ಥಿತಿಗಳಲ್ಲೂ ಒಖ ಮತ್ತು ಒಅ ಸಂಧಿಸುವ ಎಡೆಯಲ್ಲೇ ಸಮತೋಲ. ಔW ವೆಚ್ಚದಲ್ಲಿ ಔಒ ಉತ್ಪತ್ತಿ ಮಾಡಿ ಔP ಬೆಲೆಗೆ ಮಾರಿದಾಗ ಗರಿಷ್ಠ ಲಾಭ (PಖಐW).
ಮೇಲಣ ಮೂರೂ ಪರಿಸ್ಥಿತಿಗಳಲ್ಲಿ ಏಕಸ್ವಾಮಿಗೆ ಉತ್ಪಾದನೆಯ ವೆಚ್ಚ ಇದೆಯೆಂದು ಊಹಿಸಿಕೊಳ್ಳಲಾಗಿದೆ. ಆದರೆ ಉತ್ಪಾದನೆಯ ವೆಚ್ಚವೇ ಇಲ್ಲದ ಏಕಸ್ವಾಮ್ಯವೂ ಇರುವುದು ಸಾಧ್ಯ. (ಉದಾಹರಣೆ : ಔಷಧದ ಗುಣವುಳ್ಳ ನೀರಿನ ಊಟೆ). ನಕ್ಷೆ 4ರಲ್ಲಿ ಈ ಪರಿಸ್ಥಿತಿಯಲ್ಲಿ 

ಉತ್ಪಾದಕನ ಬೆಲೆ-ಉತ್ಪನ್ನಗಳ ಸಮತೋಲ ಎಲ್ಲಿ ಸಂಭವಿಸುವುವೆಂಬ ಪ್ರಶ್ನೆ ಉದ್ಭವಿಸುತ್ತದೆ. ಅಂಚಿನ ಹುಟ್ಟುವಳಿ ರೇಖೆ (ಒಖ) ಔಘಿ ಅಕ್ಷವನ್ನು (ಉತ್ಪತ್ತಿಯದು) ಸಂಧಿಸುವ ಎಡೆಯಲ್ಲಿ (ಒ) ಸಮತೋಲ ಏರ್ಪಡುತ್ತದೆ. ಆತ ಔಒ ಉತ್ಪಾದಿಸಿ ಔP ಬೆಲೆಯಲ್ಲಿ 

ಮಾರುವುದರಿಂದ ಗರಿಷ್ಠ ಲಾಭ (Pಖಒಔ) ದೊರಕುತ್ತದೆ.
ಏಕಸ್ವಾಮ್ಯದಲ್ಲೇ ಆಗಲಿ, ಸಂಪುರ್ಣ ಸ್ಪರ್ಧೆಯಲ್ಲೇ ಆಗಲಿ, ಉತ್ಪಾದಕರು ಅಂಚಿನ ವೆಚ್ಚವನ್ನೂ ಅಂಚಿನ ಹುಟ್ಟುವಳಿಯನ್ನೂ ಸಮತೂಗಿಸಲು ಪ್ರಯತ್ನಿಸುತ್ತಾರೆ. ಆದರೆ ಸಂಪುರ್ಣ ಸ್ಪರ್ಧೆಯ ಪೇಟೆಗಳಲ್ಲಿ ಯಾವ ಒಬ್ಬ ಉತ್ಪಾದಕನೂ ವೈಯಕ್ತಿಕವಾಗಿ ಬೆಲೆಯ ಮೇಲೆ 

ಪರಿಣಾಮವನ್ನುಂಟು ಮಾಡಲು ಸಾಧ್ಯವಾಗದ್ದರಿಂದ ಆತ ಪೇಟೆಯ ಧಾರಣೆಯನ್ನು ಒಪ್ಪಿ ಕೊಂಡು ಆ ಧಾರಣೆಯಲ್ಲಿ ಸಾಧ್ಯ ವಾದಷ್ಟು ಸರಕುಗಳನ್ನು ಮಾರುತ್ತಾನೆ. ಅವನಿಗೆ ಆ ಬೆಲೆಯೇ ಅಂಚಿನ ಹುಟ್ಟುವಳಿ. ಆದರೆ ಏಕಸ್ವಾಮಿಗೆ ಅಂಚಿನ ಹುಟ್ಟುವಳಿ ಸರಕಿನ ಬೆಲೆಗಿಂತ 

ಕಡಿಮೆ ಇರುತ್ತದೆ. ಆತ ಸರಬರಾಜನ್ನು ಸಂಪುರ್ಣ ಹತೋಟಿಯಲ್ಲಿಟ್ಟು ಆ ಮೂಲಕ ಬೆಲೆಯ ಮೇಲೆ ಪರಿಣಾಮ ವನ್ನುಂಟುಮಾಡುತ್ತಾನೆ.
ಏಕಸ್ವಾಮಿ ತನ್ನ ಉತ್ಪಾದನೆಯನ್ನೆಲ್ಲ ಗ್ರಾಹಕರಿಗೆ ಒಂದೇ ಬೆಲೆಗೆ ಮಾರಬೇಕಾಗಿಲ್ಲ. ತನ್ನ ವಸ್ತುಗಳಿಗಿರುವ ಪೇಟೆಯನ್ನು ವಿವಿಧ ರೀತಿಯಲ್ಲಿ ವಿಂಗಡಿಸಿ, ಪ್ರತಿಯೊಂದು ಪೇಟೆಯಲ್ಲೂ ಅಥವಾ ಪೇಟೆಯ ಬೇರೆ ಬೇರೆ ವಲಯಗಳಲ್ಲೂ ಬೇರೆ ಬೇರೆ ಬೆಲೆಗಳಿಗೆ ಮಾರುವುದು 

ಸಾಧ್ಯವಾಗುತ್ತದೆ. ಈ ರೀತಿ ಮಾರುವ ಬೆಲೆಯಲ್ಲಿ ಪಕ್ಷಪಾತ ಕಂಡುಬರುತ್ತದೆ.
ಏಕಸ್ವಾಮ್ಯದ ಪ್ರತಿಕೂಲಗಳು: ಖಾಸಗಿ ಏಕಸ್ವಾಮ್ಯ ಪರಿಸ್ಥಿತಿಯಿಂದ ಅನೇಕ ಪ್ರತಿಕೂಲಗಳುಂಟು. ಸರಕುಗಳ ಬೆಲೆ ಪೈಪೋಟಿಯ ಬೆಲೆಗಿಂತ ಹೆಚ್ಚಾಗಿರುತ್ತದೆ. ಸರಬರಾಜಿಗೆ ಕೃತಕ ಅಡ್ಡಿ ತಂದೊಡ್ಡಿ ವಿಶೇಷ ಲಾಭ ಬರುವಂತೆ ಆತ ಬೆಲೆ ಹೆಚ್ಚಿಸುತ್ತಾನೆ. ಇದಕ್ಕಾಗಿ 

ಉತ್ಪಾದನೆಯ ಪ್ರಮಾಣವನ್ನು ಕಡಿಮೆ ಮಾಡಲೂ ಆತ ಅಂಜುವುದಿಲ್ಲ. ಬಾಹ್ಯ ಮತ್ತು ಆಂತರಿಕ ಮಿತವ್ಯಯಗಳಿಂದಾಗಬಹುದಾದ ಉಳಿತಾಯಕ್ಕೆ ಆಸ್ಪದ ಕಡಿಮೆಯಾಗುತ್ತದೆ. ಹೊಸ ಉದ್ಯಮಗಳಿಗೆ ಬಂಡವಾಳ ಹಾಕಲು ಅವಕಾಶ ದೊರೆಯುವುದಿಲ್ಲ. ಹೊಸ ಸಂಸ್ಥೆಗಳು 

ಪ್ರವೇಶಿಸಿ ಸ್ಪರ್ಧಿಸುವುದೂ ಸಾಧ್ಯವಾಗುವುದಿಲ್ಲ. ಉತ್ಪಾದನೆಯ ವಿಷಯದಲ್ಲಿ ತಾಂತ್ರಿಕ ಪ್ರಗತಿಗೆ ಯಾವ ಜರೂರೂ ಇರುವುದಿಲ್ಲ. ಆರ್ಥಿಕ ವಿಷಮತೆ ಹೆಚ್ಚುತ್ತದೆ. ಏಕಸ್ವಾಮಿಗಳ ಮತ್ತು ಅವರ ಸಂಬಂಧಿಗಳ ಹಿತಾಸಕ್ತಿಗಳ ಬೆಳೆವಣಿಗೆಯಾಗಿ ಸಮಾಜಹಿತಕ್ಕೆ 

ಧಕ್ಕೆಯುಂಟಾಗುತ್ತದೆ.
ಏಕಸ್ವಾಮ್ಯದ ಅನುಕೂಲಗಳು: ಏಕಸ್ವಾಮ್ಯದಲ್ಲಿ ಕೆಲವು ಅನುಕೂಲಗಳೂ ಉಂಟು. ಸ್ಪರ್ಧೆಯ ಪರಿಸ್ಥಿತಿಯಲ್ಲಿ ಪ್ರತಿಯೊಂದು ಸಂಸ್ಥೆಯೂ ತನ್ನ ಸರಕಿನ ಜಾಹೀರಾತಿಗಾಗಿ ಅಗಾಧ ಹಣ ಖರ್ಚು ಮಾಡುತ್ತದೆ. ಆದರೆ ಏಕಸ್ವಾಮ್ಯದಲ್ಲಿ ಇದರ ಆವಶ್ಯಕತೆ ಬೀಳದಿರುವುದರಿಂದ 

ಅದರ ಮಾರಾಟದ ಖರ್ಚಿನಲ್ಲಿ ಮಿತವ್ಯಯವಾಗುತ್ತದೆ. ಅಧಿಕ ಬಂಡವಾಳದ ಬೆಂಬಲವಿರುವುದರಿಂದ ದೊಡ್ಡ ಪ್ರಮಾಣದ ಉತ್ಪಾದನೆಗೆ ಬೇಕಾದ ಸುಧಾರಿಸಿದ ಯಂತ್ರೋಪಕರಣಗಳನ್ನೂ ಸರಕು ಸಾಮಾನುಗಳನ್ನೂ ಕೊಳ್ಳುವುದು ಸಾಧ್ಯ. ಇದರಿಂದ ಉತ್ಪಾದನೆಯ 

ಖರ್ಚು ಕಡಿಮೆಯಾಗಬಹುದು. ಬೃಹತ್ ಗಾತ್ರದ ಉತ್ಪಾದನೆಯ ಸೌಲಭ್ಯಗಳೆಲ್ಲ ಇದಕ್ಕೆ ಲಭಿಸುತ್ತವೆ. ಅಧಿಕ ಪ್ರಮಾಣದ ಉತ್ಪಾದನೆಯಿಂದ ವಸ್ತುಗಳನ್ನು ಶಕ್ಯವಾದಷ್ಟು ಕಡಿಮೆ ಬೆಲೆಗೆ ಮಾರಲು ಅವಕಾಶವಾಗುತ್ತದೆ.
ಏಕಸ್ವಾಮ್ಯದ ನಿಯಂತ್ರಣ: ಏಕಸ್ವಾಮ್ಯ ಪರಿಸ್ಥಿತಿಯಲ್ಲಿ ಕೆಲವು ನಿರ್ಬಂಧಗಳು ತಾವಾಗಿಯೇ ಕಾಣಿಸಿಕೊಳ್ಳುವುವು. ಏಕಸ್ವಾಮ್ಯದ ಬೆಲೆಯನ್ನು ಅತಿಯಾಗಿ ಹೆಚ್ಚಿಸಿದರೆ, ಅವನ ಸರಕುಗಳಿಗೆ ಸಾರ್ವತ್ರಿಕ ಬಹಿಷ್ಕಾರ ಉದ್ಭವಿಸುವ ಭಯವಿದೆ. ಇಲ್ಲವೇ, ಆ ಪದಾರ್ಥಗಳಿಗೆ 

ಬದಲಾಗಿ ಬೇರೆ ಪದಾರ್ಥಗಳನ್ನು ಕೊಳ್ಳುವ ಮನೋವೃತ್ತಿ ಜನಗಳಲ್ಲಿ ಬೆಳೆಯಬಹುದು.
ಸರ್ಕಾರಗಳೂ ಸಾರ್ವಜನಿಕ ಹಿತರಕ್ಷಣೆಯ ದೃಷ್ಟಿಯಿಂದ ಏಕಸ್ವಾಮ್ಯದ ವ್ಯವಹಾರಗಳನ್ನು ನಿಯಂತ್ರಿಸಬೇಕಾಗುತ್ತದೆ. ಈ ಕಾರ್ಯನಿರ್ವಹಣೆಗೆ, ಬೆಲೆಯ ನಿಯಂತ್ರಣಗಳನ್ನೂ ಏಕಾಧಿಕಾರದ ಸಂಸ್ಥೆಗಳು ಸ್ಥಾಪಿತವಾಗದಂತೆ ಸೂಕ್ತವಾದ ಕಾಯಿದೆಗಳನ್ನೂ ಜಾರಿಗೆ 

ತರಬಹುದು. ಏಕಸ್ವಾಮ್ಯಗಳ ಸಮಾಜವಿರೋಧಿ ಪ್ರವೃತ್ತಿಗಳನ್ನು ಪ್ರತಿಭಟಿಸಲು ಬಳಕೆದಾರರ ಸಂಘಗಳಿಗೆ ಉತ್ತೇಜನ ಕೊಡಬಹುದು. ಸ್ಪರ್ಧಿಗಳ ನಡುವೆ ಜೀವನ್ಮರಣ ಹೋರಾಟ ಹೆಚ್ಚಿ, ಶಕ್ತ ಸಂಸ್ಥೆ ಉಳಿದುಕೊಂಡು ಉಳಿದವನ್ನೆಲ್ಲ ನಿರ್ಮೂಲಗೊಳಿಸುವುದು 

ಸಾಧ್ಯವಾಗುವಂಥ ಪ್ರವೃತ್ತಿಗಳನ್ನೂ ಪರಿಸ್ಥಿತಿಗಳನ್ನೂ ತಡೆಗಟ್ಟಬಹುದು. ಇದಲ್ಲದೆ, ಏಕಸ್ವಾಮ್ಯದ ವ್ಯವಹಾರಗಳನ್ನು ಸರ್ಕಾರದ ಮೇಲ್ವಿಚಾರಣೆಗೊಳಪಡಿಸಿ, ಅವರ ಕೃತ್ರಿಮ ರೀತಿನೀತಿಗಳನ್ನು ಸಾರ್ವಜನಿಕರಿಗೆ ತಿಳಿಯುವಂತೆ ಪ್ರಕಟಿಸುವುದೂ ಒಂದು ಮಾರ್ಗ. 	

          (ಡಿ.ಎಂ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ